ಏನು ಸುಕೃತವ ಮಾಡಿದಳೊ ಯಶೊದೆ vadirajaru
Restart mobile & try if the above audio is not playing
ಶ್ರೀ ಶ್ರೀ ವಾದಿರಾಜರ ಕೃತಿ
ರಾಗ :ಕಾಪಿ ಆದಿತಾಳ
ಏನು ಸುಕೃತವ ಮಾಡಿದಳೊ ಯಶೊದೆ ||ಪ||
ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿ ಮುದ್ದಿಪಳಂತೆ ||ಅ ಪ||
ಗಂಗಾಜನಕಗೆ ಗಡಿಗೆ ನೀರನೆರೆವಳಂತೆ |
ಮಂಗಳಾಂಗಗೆ ಭಾಮೆ ಶೃಂಗರಿಪಳಂತೆ ||
ತುಂಗ ಭೂಧರನ ತೊಟ್ಟಿಲೊಳು ಮಲಗಿಪಳಂತೆ |
ಕಂಗಳಿಗಗೋಚರನ ಎತ್ತಿ ಮುದ್ದಿಪಳಂತೆ ||೧||
ಚತುರಾಸ್ಯನ ಪಿತನ ಸುತನೆಂದೆತ್ತುವಳಂತೆ |
ಶೃತಿವಿನುತನಿಗೆ ಜೋಗುಳವ ಪಾಡುವಳಂತೆ ||
ಶತರವಿತೇಜಗಾರತಿಯನೆತ್ತುವಳಂತೆ |
ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ ||೨||
ಜಗವನೆತ್ತಿದವನ ಮಗುವೆಂದೆತ್ತುವ
ನಿಗಮಗೋಚರನ ಈಕ್ಷಿಸುವಳಂತೆ ||
ಅಗಣಿತ ಸದ್ಗುಣನ ಹಗ್ಗದಿ ಕಟ್ಟುವಳಂತೆ |
ಮಿಗೆ ನಿತ್ಯತೃಪ್ತನಿಗೆ ಪಾಲನೆರೆವಳಂತೆ ||೩||
ಬಹುಮುಖನಿಗೆ ಭಾಮೆ ಮುದ್ದನೀಡುವಳಂತೆ |
ಅಹಿತಲ್ಪನಿಗೆ ಹಾವತುಳಿದಿಯೆಂಬುವವಳಂತೆ |
ಬಹುದೈತ್ಯ ಸಂಹರಗೆ ಭಯವ ತೋರುವಳಂತೆ |
ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ ||೪||
ಕಡಗೋಲ ನೇಣನು ಕೈಯೊಳಗೆ ಪಿಡಿದು |
ಪಾಲ್ಗಡಲೊಡೆಯ ದ್ವಾರಕಾನಿಲಯ ||
ಬಿಡದೆ ಸಲಹುವ ಹಯವದನ ಮೋಹನ ಮುದ್ದು |
ಉಡುಪಿಯ ಕೃಷ್ಣನ್ನ ಉಡಿಯೊಳೆತ್ತುವಳಂತೆ ||೫||
***
Comments
Post a Comment