ಸಕಲವೆಲ್ಲವು ಹರಿ ಸೇವೆಯೆನ್ನಿ purandara dasaru

 



Restart mobile & try if the above audio is not playing

ಶ್ರೀ ಪುರಂದರದಾಸರ ಕೃತಿ ....


ರಾಗ : ಪೂರ್ವಿಕಲ್ಯಾಣಿ    ಆದಿತಾಳ


ಸಕಲವೆಲ್ಲವು ಹರಿ ಸೇವೆಯೆನ್ನಿ l 

ರುಕುಮಿಣಿಯರಸ ವಿಠಲನಲ್ಲದಿಲ್ಲವೆನ್ನಿ || 


ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ l

ನಡೆವುದೆಲ್ಲವು ದೇವರ ಯಾತ್ರೆಯೆನ್ನಿ l 

ಕೊಡುವ ದಾನವು ಕಾಮಜನಕಗರ್ಪಿತವೆನ್ನಿ l 

ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ || 1 ||


ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ l

ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ l 

ಎಸೆವ ಆಭರಣ ಗಳು ಯಶೋದೆನಂದನಗೆನ್ನಿ l 

ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ || 2 ||


ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ l 

ಊಟ ಸತ್ಕಾರ ಕಂಜನಾಭಗೆ ಎನ್ನಿ l 

ನೀಟಾದ ವಸ್ತುಗಳು ಕೈಟ ಭಾಂತಕಗೆನ್ನಿ l 

ಕೋಟಲೆ ಸಂಸಾರ ನಾಟಕಧರಗೆನ್ನಿ || 3 |


ನಿದ್ರೆ ಜಾಗರವು ಸಮುದ್ರಶಯನಗೆನ್ನಿ l 

ಭದ್ರನಿಧಿ ಗಜರಾಜ ವರದಗೆನ್ನಿ l 

ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ l 

ಶ್ರೀಮುದ್ರೆಗಳ ಧರಿಸಿ ಹರಿಯ ದಾಸರಿಗೆನ್ನಿ |\ 4 ||


ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ l

ಎಣಿಸಲಾಗದ ಅನಂತಮಹಿಮನೆನ್ನಿ l 

ಸೆಣಸುವ ರಕ್ಕಸರ ಶಿರವ ಚೆಂಡಾಡುವ

ಪ್ರಣವ ಗೋಚರ ಪುರಂದರವಿಠಲನೆನ್ನಿ || 5 ||

***

Comments