ಎನ್ನ ಬಿಂಬ ಮೂರುತಿಯ ಪೂಜಿಪೆ ನಾನು vyasarajaru enna bimba murutiya


Restart mobile & try if the above audio is not playing


ಶ್ರೀ ಶ್ರೀವ್ಯಾಸರಾಜರ ಕೃತಿ

ರಾಗ : ವಲಚಿ   ಖಂಡಛಾಪುತಾಳ

ವ್ಯಾಪ್ತೋಪಾಸನೆ

ಇಲ್ಲಿ ಶ್ರೀವ್ಯಾಸರಾಜರು ಅದ್ಭುತವಾದ ಪರಿಕಲ್ಪನೆಯನ್ನು ತೆರೆದಿಟ್ಟರು.  ಇದನ್ನೇ ವ್ಯಾಪ್ತೋಪಾಸನೆ ಎಂದರು.  ಈ ಅನುಸಂಧಾನ ಮನದಲ್ಲಿ ತುಂಬಿರಬೇಕು.  ಹೃದಯ ಕಮಲದಲ್ಲಿದ್ದು ಸರ್ವವ್ಯಾಪ್ತನಾದ ಶ್ರೀಹರಿಯ ಚಿಂತನೆಯೇ ಅನುಸಂಧಾನದ ವೈಭವ.  ಬಿಂಬರೂಪಿ ಭಗವಂತನ ನಿಜಾರ್ಥದ ಪೂಜೆ ಇದಾಗಿದೆ.  ಇದಕ್ಕೆ ಅಧಿಕಾರಿಗಳು ದೇವ ಮುನಿಗಳಾದರೂ ನಮ್ಮ ಚಿಂತನೆಗೆ ತಂದು ಮನದಲ್ಲಿ ತುಂಬಿಕೊಳ್ಳಬೇಕು.


ಎನ್ನ ಬಿಂಬ ಮೂರುತಿಯ ಪೂಜಿಪೆ ನಾನು

ಮನಮುಟ್ಟಿ ಅನುದಿನ ಮರೆಯದೆ ಮರೆಯದೆ ll ಪ ll


ಗಾತ್ರವೆ ಮಂದಿರ ಹೃದಯವೆ ಮಂಟಪ

ನೇತ್ರವೆ ಮಹದೀಪ ಹಸ್ತ ಚಾಮರವು l

ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ

ಶಾಸ್ತ್ರ ಮಾತುಗಳೆಲ್ಲ ಮಂತ್ರಗಳು ll 1 ll


ನುಡಿದ ಶಬ್ದಗಳೆಲ್ಲ ಹೂವುಗಳಾಯಿತು

ನಡೆವುದೆಲ್ಲವು ಬಹು ನಾಟ್ಯಂಗಳು l

ಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರ

ಕೊಡುವ ಭೂಷಣವೆಲ್ಲ ದಿವ್ಯಾಭರಣ ll 2 ll


ಧರಿಸಿದ ಗಂಧವೆ ಚರಣಕ್ಕೆ ಗಂಧವು

ಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆ l

ಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿ

ಅರಿತೊಡಲಿಗೆ ಉಂಬನ್ನವೆ ನೈವೇದ್ಯ ll 3 ll


ಎನ್ನ ಸ್ವರೂಪವೆಂಬುದೆ ರನ್ನಗನ್ನಡಿ

ಎನ್ನ ಮನೋವೃತ್ತಿ ಎಂಬುದೆ ಛತ್ರ l

ಇನ್ನು ನುಡಿವ ಹರಿ ನಾಮಾಮೃತವೇ ತೀರ್ಥ

ಎನ್ನ ಮನವೆಂಬುದೆ ದಿವ್ಯ ಸಿಂಹಾಸನ ll 4 ll


ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆ

ಅನ್ಯವಾದ ಮಂತ್ರ ತಂತ್ರವ್ಯಾಕೆ l

ಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆ

ಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ ll 5 ll

**

Comments