ದೃಷ್ಟಿದೋಷವು ತಗುಲಿತು ಎನ್ನ ಕಂದನಿಗೆ vidyaprasanna teertharu drushtidoshavu tagulitu enna kandanige


Restart mobile & try if the above audio is not playing

ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ

ರಾಗ : ಜನಸಮ್ಮೋದಿನಿ   ಖಂಡಛಾಪು


ದೃಷ್ಟಿದೋಷವು ತಗುಲಿತು ಎನ್ನ ಕಂದನಿಗೆ

ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲಿ॥


ಸೇರು ಬೆಣ್ಣೆಯ ತಿಂದ ದೂರು ಕೇಳಿದನಿಂದು

ಚಾರುಮುಖಿಯರ ನೋಟ ಕ್ರೂರವೆಂದರಿ ಕಂದ

ಈರೇಳು ಭುವನಗಳ ತಿಂದು ತೇಗುವ ದೇವ

ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ॥


ಎಂದು ಕಾಣೆವು ಇಂಥಾ ಸುಂದರನ ನಾವೆಂದು

ಮಂದಗಮನೆಯರ ನುಡಿ ಅಂದವಾಯಿತೆ ಕಂದ

ಸಂದೇಹವಿಲ್ಲವರ ಶೃಂಗಾರಕೀಫಲವು

ಸೌಂದರ್ಯಜಲಧಿ ಮುನುಮಥನ ಮನುಮಥನೇ ಗತಿ॥


ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು

ನಾರಸಿಂಹಾದಿ ವರಮಂತ್ರಗಳ ಜಪವಾಯ್ತು

ಭಾರಿ ಪುಸಿಯಾಯ್ತು ಜನನಿಯು ಹರಿಸಿದೀತನಲಿ

ಮೀರಿಹನು ಯಂತ್ರಮಂತ್ರಾರ್ಥವೆಲ್ಲಾ ಪ್ರಸನ್ನ ॥

**

summary

ದೃಷ್ಟಿ ಬೀಳೋದು ಅಂದರೆ ಅದು ಬೇರೆಯವರ ದೃಷ್ಟಿಯಿಂದ ಸೃಷ್ಟಿಯಾಗುವ  ಒಂದು ಛಾಯೆಯ  ಕಾಣದ ರೂಪ.. ಯಾರ ಮೇಲೆ ಬಿದ್ದಿರುತ್ತೋ ಅವರ ಸುತ್ತುವರೆದು ಇದ್ದು, ಸುಸ್ತು, ಕಣ್ಣು ಉರಿ,ಊಟ ತಿಂಡಿ ಸೇರದಂತಿರುವುದು,  ಚಿಕ್ಕ ಮಕ್ಕಳಿಗಾದರೆ ಹಟ ಹೀಗೆ ನಾನಾ ರೂಪದಲ್ಲಿ ಪರಿಣಾಮ ಬೀರುತ್ತದೆ.  ಕೆಲವು ಜನರ ದೃಷ್ಟಿ ಕ್ರೂರವಾಗಿದ್ದು ಬೇಗ ಪರಿಣಾಮ ಬೀರುತ್ತದೆ. ಇಂತಹ ದೃಷ್ಟಿಯ ಬಗ್ಗೆ ಕೆಲವರಿಗೆ ನಂಬಿಕೆ ಇಲ್ಲ.. ಅವೆಲ್ಲಾ ಮೂಢನಂಬಿಕೆ ಅಂತ ಹೇಳುತ್ತಾರೆ. ಆದರೆ ಇದು ಪ್ರಾಚೀನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಂಪ್ರದಾಯ. ಸಾಮಾನ್ಯವಾಗಿ ಮಕ್ಕಳಿಗೆ ಬೇಗ ದೃಷ್ಟಿಯ ಪರಿಣಾಮವಾಗ್ತದೆ. ಹಾಗಾಗದಂತೆ ಶುದ್ಧವಾಗಿ ತಯಾರಿಸಿದ ಕಾಡಿಗೆ ಪ್ರತಿನಿತ್ಯ ಹಚ್ಚುತ್ತಾರೆ‌. ಸ್ತ್ರೀಯರೂ ಕೂಡ ಪರಪುರುಷರ ದೃಷ್ಟಿ  ತಮ್ಮ ಮೇಲೆ ಬಿದ್ದು ಕೆಟ್ಟ ಪರಿಣಾಮ ಆಗದಿರಲೆಂದು ಕಣ್ಣಿಗೆ ಕಾಡಿಗೆ ಹಚ್ಚುವುದು ಪದ್ಧತಿ . ಮಕ್ಕಳಿಗೆ ಕಾಡಿಗೆ ಹಚ್ಚುವುದರ ಜೊತೆ, ಗೋಧೂಳಿಯನ್ನು ಹಚ್ಚುವುದು, ಶಾಸ್ತ್ರೀಯವಾಗಿ ಕುಸ್ತಿ ಆಡುವ ಜಾಗದ ಮಣ್ಣು  ಹಣೆಗೆ ಹಚ್ಚುವುದು, ಹತ್ತಿಯ ಗೊಂಬೆ ಅಥವಾ ಕಡ್ಡಿಯಿಂದ  ನಿವಾಳಿಸಿ, ಸುಟ್ಟು ಅದನ್ನು ಹಣೆಗೆ ಹಚ್ಚುವುದು, ಸಕ್ಕರೆ ಅಭಿಮಂತ್ರಿಸಿ ತಿನ್ನಿಸುವುದು ಹೀಗೆ ನಾನಾ ರೀತಿಯಲ್ಲಿ ದೃಷ್ಟಿಯ ಪರಿಣಾಮ ಕಮ್ಮಿ ಆಗಲು ಹಿರಿಯರು ಹಾಕಿದ ಪದ್ಧತಿ.  ಕೃಷ್ಣ ಪರಮಾತ್ಮನಿಗೂ ಯಶೋಧೆ ದೇವಿಯು ಹೀಗೆ ಹಲವಾರು ರೀತಿಯಲ್ಲಿ ದೃಷ್ಟಿ ತೆಗೆದ ವಿಚಾರಗಳನ್ನು ಹರಿದಾಸರು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ಪ್ರಸ್ತುತ ಈ ಕೃತಿಯಲ್ಲಿ ಮೂಲಗೋಪಾಲನ ಆರಾಧಕರಾದ ಶ್ರೀವಿದ್ಯಾಪ್ರಸನ್ನತೀರ್ಥರೂ ಕೂಡ ಕೃಷ್ಣನಿಗೆ ದೃಷ್ಟಿ ತೆಗೆದ ವಿವಾರವನ್ನು ತಿಳಿಸಿದ್ದಾರೆ. ತನ್ನ ಕಂದನಿಗೆ  ದೃಷ್ಟ ತಗಲಬಾರದೆಂದು ದೃಷ್ಟಿಗೆ ಅಗೋಚರನಾದ ಅಪ್ರಾಕೃತನಾದ ಕೃಷ್ಣಾಭಿನ್ನನಾದ ಸ್ವಾಮಿಯನ್ನು ಪ್ರಾರ್ಥಿಸುತ್ತಾಳೆ. ದೃಷ್ಟಿಗೆ ಅಗೋಚರನಾದ ಸ್ವಾಮಿ ಇಂದು ಗೋಚರನಾಗಿ ಯಶೋದೆಗೆ ಅಪ್ರಾಕೃತ, ಆನಂದಮಯ  ಶರೀರವುಳ್ಳವನಾದ ಸ್ವಾಮಿ ಇಂದು ಪ್ರಾಕೃತ ದೇಹವನ್ನು ಧರಿಸಿಕೊಂಡವನಂತೆ ಕಾಣುತ್ತಿದ್ದಾನೆ. ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ ಅಂತ ಯಶೋದೆಯ ಸುಕೃತವನ್ನು ಶ್ರೀವಾದಿರಾಜರು ವರ್ಣಿಸುತ್ತಾರೆ. 

ಈ ಹಾಡು ನಮ್ಮ ಮಕ್ಕಳನ್ನು ಕುರಿತು ಅನುಸಂಧಾನ ಮಾಡಿ  ಹೇಳಿದರೂ ಅವರ ದೃಷ್ಟಿ ಕಮ್ಮಿ ಆಗುತ್ತದೆ. 

 ಮಕ್ಕಳು ತಾವು ಏನು ಮಾಡಿದರೂ ಅದು ನೋಡಲಿಕ್ಕೆ ಛಂದ. ಕಿಲ ಕಿಲ ನಗು, ಆ ನೋಟ, ಕೈ ಮಾಡುವ ರೀತಿ, ಪುಟ್ಟ ಪುಟ್ಟ ಹೆಜ್ಜೆ, ಚೇಷ್ಟೆ ಕೊನೆಗೆ ಅಳುವುದೂ ಕೂಡ ಚಂದ.. ಮಕ್ಕಳ ಊಟ  ಸಾಮಾನ್ಯವಾಗಿ ಯಾರಿಗೂ ಕಾಣದಂತೆ ಮಾಡಿಸುವುದು ತಾಯಿಯ ಧರ್ಮ..ತುಂಬಾ ಸಲ ಮಕ್ಕಳಿಗೆ ದೃಷ್ಟಿ ಆಗೋದೇ ಆಹಾರದ ವಿಷಯದಲ್ಲಿ.. ಸಣ್ಣ ವಯಸ್ಸಿಗೆ ಎಷ್ಟು ಹಾಲು ಕುಡೀತದೆ ಇದು ಅಂತ ಅನ್ಕೊಂಡ್ರೂ ಸಾಕು, ಆ ಮಗು ಆಹಾರ ತಗೋಳದೇ ಬಿಟ್ಟು ಬಿಡ್ತದೆ.. ಸ್ವಾಮಿ ಕೃಷ್ಣರೂಪದಿಂದ ಅನೇಕ ಗೋಪಿಕಾ ಸ್ತ್ರೀಯರ ಮನೆಗಳಲ್ಲಿ, ಅವರ ತಪಸ್ಸಿನ ಫಲದಂತೆ ಭಕ್ತಿಯನ್ನು  ಹಾಲು, ಬೆಣ್ಣೆ, ತುಪ್ಪ, ಮೊಸರು, ಖಜ್ಜಾಯ, ಹಣ್ಣುಗಳ  ರೂಪದಲ್ಲಿ ಸ್ವೀಕರಿಸುತ್ತಿದ್ದ. ಜನರೆಲ್ಲಾ ಅಷ್ಟು ತಿಂದ ಇಷ್ಟು ತಿಂದ ಅಂತಿದ್ರು. ಯಶೋದೆ ಮಗನಿಗೆ ದೃಷ್ಟಿ ಆಗಬಾರದೆಂದು ಪ್ರಳಯಕಾಲದಲ್ಲಿ ಹದಿನಾಲ್ಕು ಲೋಕಗಳನ್ನೇ ತಿಂದು ತೇಗುವ ದೇವರು ನನ್ನ ಕೂಸನ್ನು ಕಾಪಾಡಲಿ ಅಂತ ಪ್ರಾರ್ಥಿಸುತ್ತಾಳೆ. ಅದ್ಭುತವಾದ ಪ್ರಾರ್ಥನೆ.. ಅಲ್ಲಿ ಅಷ್ಟು ಹಾಲು ಕುಡೀತಿದ್ದ ಕೃಷ್ಣನೂ ಹದಿನಾಲ್ಕು ಲೋಕಗಳನ್ನು ತಿಂದು ತೇಗುವ ದೇವನೂ ಒಂದೇ ಆಗಿದ್ದಾನೆ ಅನ್ನುವ ಚಿಂತನೆ ಒಂದು ಕಡೆಯಾದರೆ, ಅಷ್ಟೆಲ್ಲಾ ತಿಂದು ತೇಗುವ ಸ್ವಾಮಿ ನಮ್ಮೆಲ್ಲರ ಬಿಂಬರೂಪದಲ್ಲಿರುತ್ತಾನಾದ್ದರಿಂದ ಈ ರೀತಿಯ ಚಿಂತನೆ ಮಾಡಿದರೆ, ಕೆಟ್ಟ ದೃಷ್ಟಿಯಿಂದ ತಿಂದ ಆಹಾರ ಅಜೀರ್ಣವಾಗದೇ ಸುಲಭವಾಗಿ ಜೀರ್ಣವಾಗಿ, ಆರೋಗ್ಯದಿಂದ ಇರುತ್ತವೆ. ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ


ಎರಡನೆ ನುಡಿಯಲ್ಲಿ ನೋಟದ ದೃಷ್ಟಿಯ ದೋಷದ ಬಗ್ಗೆ ತಿಳಿಸಿ, ಸುಂದರಕೆ ಬಲು ಸುಂದರನಂತಿರುವ ಸ್ವಾಮಿಯ  ಸೌಂದರ್ಯಕ್ಕೆ ಮಾರುಹೋಗದವರು ಯಾರಿದ್ದಾರೆ! ಇವಗೆ ಅನ್ಯ ಕನ್ಯೆ ಏಕೆಂದು ಬೆರಗಾಗಿ ಅಂತ ಸ್ವಾಮಿಯ ಮೋಹಿನಿ ರೂಪವನ್ನು ನೋಡಿ ಅಮ್ಮನವರು ಮಾಡಿದ ಚಿಂತನೆಯನ್ನು ದಾಸರು ತಿಳಿಸಿದ್ದಾರೆ. ಇಂತಹ ಮಗುವಿನ ಸೌಂದರ್ಯ  ಗೋಪಿಕೆಯರ ನೋಟದ ದೃಷ್ಟಿ ಬೀಳಬಾರದೆಂದು ಮನ್ಮಥನಿಗೂ ಮನ್ಮಥನಾದ ರೂಪವನ್ನು ಚಿಂತನೆ ಮಾಡುವುದನ್ನು ತಿಳಿಸುತ್ತಾರೆ ಪ್ರಸನ್ನ ತೀರ್ಥರು. ಎಂದು ಕಾಣೆವು ಇಂಥ ಸುಂದರನ ನಾವೆಂದು, ಮಂದಗಮನೆಯರ ನುಡಿ ಅಂದವಾಯಿತೇ ಕಂದ, ಸಂದೇಹವಿಲ್ಲವರ ಶೃಂಗಾರ ಕೀ ಫಲವು,ಸೌಂದರ್ಯ ಜಲದೀ ಮನುಮಥನ ಮನುಮಥನೇ ಗತಿ ಅಂತ ಚಿಂತನೆ ಮಾಡುತ್ತಾರೆ.ನಮ್ಮ ಮಕ್ಕಳ ಅಂದದ ದೃಷ್ಟಿ ಆಗುವುದು ಸರ್ವೇ ಸಾಮಾನ್ಯ. ಆಗ  ಮನೆಯಲ್ಲಿ ಮೇಲೆ ತಿಳಿಸಿದ ಪರಿಹಾರದ ಜೊತೆ, ಕೂಸಿನಲ್ಲಿರುವ ಮನುಮಥನಿಗೂ ಮನುಮಥನಾದ ಸ್ವಾಮಿಯ ರೂಪ ಪ್ರತಿಬಿಂಬದಂತಿದ್ದು, ದೃಷ್ಟಿ ದೋಷಕ್ಕೆ ಒಳಗಾಗದ ರೂಪ ಅಂತ ಚಿಂತನೆ ಮಾಡಿದರೆ ನಮ್ಮ ಮಕ್ಕಳಿಗೂ ತಗಲುವ ದೃಷ್ಟಿ ದೋಷದ ಪರಿಹಾರ ಆಗುತ್ತದೆ. 


  ಮುಂದಿನ ನುಡಿಯಲ್ಲಿ, ನೀರು, ಬೂದಿ ಹಲವಾರು ರೀತಿಯಲ್ಲಿ ಮಂತ್ರಿಸಿ ದೃಷ್ಟಿ  ತೆಗೆಯುವುದನ್ನು ತಿಳಿಸಿ, ಸ್ವಾಮಿಗೆ ಈವ್ಯಾವೂ ರೀತಿಗಳೂ ಕೆಲಸ ಮಾಡಲಿಲ್ಲ, ಯಾಕೆಂದರೆ ಅವನಿಗೆ ಇವ್ಯಾವುದರ ಪರಿಣಾಮ ಆಗುವುದಿಲ್ಲ. ಇನ್ನೂ ನಾರಸಿಂಹಾದಿ ವರಮಂತ್ರಜಪವಾಯ್ತು  ಅಂದರೆ ಅನೇಕ ಭಗವದ್ರೂಪಗಳ (  ಸರ್ವರ ಬಿಂಬವು ನರಸಿಂಹ ರೂಪವಾದ್ದರಿಂದ ಇಲ್ಲಿ ನಾರಸಿಂಹಾದಿ ಅಂತ ತಿಳಿಸಿದ್ದಾರೆ) ಜಪಾದಿಗಳು ಕೂಡ ಮಾಡಿದ್ದನ್ನು ತಿಳಿಸಿ ಅವೂ ಕೂಡ ಭಗವಂತನಿಗೆ ಏನೂ ಪರಿಣಾಮವಾಗಲಿಲ್ಲಅಂತ ತಿಳಿಸಿ ಯಾಕೆ ಅಂದರೆ ಎಲ್ಲ ರೂಪಗಳೂ ನಮ್ಮ‌ ಕೃಷ್ಣನೇ ಆಗಿದ್ದಾನೆ ಎನ್ನುವುದನ್ನು  ತಿಳಿಸಿ, ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ- ಈ ಎಲ್ಲಾ ದೃಷ್ಟಿ ತೆಗೆಯುವ ಪದ್ಧತಿಗಳನ್ನೆಲ್ಲಾ ಅವನು ಮೀರಿದ್ದಾನೆ ಯಾಕೆ ಅಂದರೆ ಅವನು ಪ್ರಸನ್ನ ಎಂದು ತಿಳಿಸಿದ್ದಾರೆ ಶ್ರೀಪ್ರಸನ್ನ ತೀರ್ಥರು. ಪ್ರಕರ್ಷಣವಾದ ಸುಖವನ್ನು ಅನಾದಿ  ಕಾಲದಿಂದ ಅನಂತ ಕಾಲದವರೆಗೂ ತನ್ನಲ್ಲಿ ತಾನೇ ಪಡುವ ಸ್ವರಮಣನಾದ್ದರಿಂದ ಅವನು ಪ್ರಸನ್ನ ಎನ್ನುವ ಪದ ಪ್ರಯೋಗ.


ಇನ್ನೂ ನಮ್ಮ ಮಕ್ಕಳಿಗೆ ಅನ್ವಯವಾಗುವಂತೆ, ಏಷ್ಟೇ  ನಾನಾ ರೀತಿಯ ಪದ್ಧತಿಗಳನ್ನು ಅನುಸರಿಸಿದರೂ ಬಿಂಬರೂಪದ ಸ್ವಾಮಿ ( ನರಸಿಂಹ ರೂಪದಿಂದ ಇದ್ದು), ಎಲ್ಲವನ್ನೂ ಮೀರಿದ್ದಾನೆ ಅಂತ ಚಿಂತನೆ ಮಾಡಿದರೆ ನಮ್ಮ ಮಗುವಿಗೂ ಯಾವುದೇ ದೃಷ್ಟಿಯ ದೋಷ ತಗಲುವುದಿಲ್ಲ ಅನ್ನುವ ಯಥಾರ್ಥವನ್ನು , ಬಿಂಬ ಪ್ರತಿಬಿಂಬದ ಸುಂದರ ಚಿಂತನೆಯ  ಮುಖಾಂತರ  ಪ್ರಸನ್ನ ತೀರ್ಥರು ತಿಳಿಸಿದ್ದಾರೆ‌. 

ಇಂತಹ ಅದ್ಭುತವಾದ ತತ್ವಗಳನ್ನು, ಪ್ರಮೇಯಗಳನ್ನು ಸುಲಭವಾಗಿ ಮನದಟ್ಟಾಗುವಂತೆ ಸರಳ ಸಾಹಿತ್ಯಗಳ ಮೂಲಕ ತಿಳಿಸಿ ಮಹದುಪಕರಿಸಿದ ಶ್ರೀವಿದ್ಯಾಪ್ರಸನ್ನ ತೀರ್ಥರು, ಅವರ ಅಂತರ್ಯಾಮಿ ಸಕಲ ಗುರುಗಳು, ವಾಯು ದೇವರು, ಮತ್ತು ಭಗವಂತ ನಮ್ಮೆಲ್ಲರನ್ನೂ ಅನುಗ್ರಹಿಸಲಿ ಅಂತ   ಭಕ್ತಿಯಿಂದ ಪ್ರಾರ್ಥಿಸೋಣ.

ಕೃಪೆ : ಶ್ರೀ. ಪ್ರಭಂಜನಾಚಾರ್ಯ, ಬಳ್ಳಾರಿ.

**

Comments