ಇಂದು ನಾನೇನು ಸುಕೃತವ ಮಾಡಿದೆನೊ purandara dasaru indu nanenu sukrutava

 

Restart mobile & try if the above audio is not playing


ಶ್ರೀ ಶ್ರೀಪುರಂದರದಾಸರ ಕೃತಿ

ರಾಗ : ಸರಸ್ವತಿ  ತಾಳ : ಮಿಶ್ರಛಾಪು- ತಿಶ್ರನಡೆ 


ಇಂದು ನಾನೇನು ಸುಕೃತವ ಮಾಡಿದೆನೊ

ಮಂಗಳಮಹಿಮ ವೆಂಕಟ ಬಂದ ಮನೆಗೆ ||ಪ||


ಹಾರ ಕೇಯೂರ ಹೊನ್ನುಂಗುರ ಬೆರಳ

ಹಾರದ ನಡುವೆ ಹಾಕಿದ ಏಳು ಪದಕ

ತೋರಮುತ್ತಿನ ಕಂಠಮಾಲೆ ಮಾಲಿಕೆಯ

ಮೇಲುಗಿರಿಯ ವೆಂಕಟ ಬಂದ ಮನೆಗೆ ||


ಎಸಳು ಸುತ್ತಿದ ಪಟ್ಟೆ ಎಸೆವ ಕಸ್ತೂರಿಯು

ಹಸನ ಸಣ್ಣ ನಾಮ ಸಾದೂತಿಲಕವು

ಕುಸುಮ ಮಲ್ಲಿಗೆ ಜಾಜಿ ಎಸೆವ ಸಂಪಿಗೆಯು

ವಸುಧೇಶ ಸೊಬಗ ವೆಂಕಟ ಬಂದ ಮನೆಗೆ ||


ಬಿಗಿದು ಸುತ್ತಿದ ಓಲೆ ಬಿಡು ಮುತ್ತಿನೊಂಟಿ

ಬಗೆಬಗೆಯುಂಗುರ ಧಗಧಗಿಸುತಲಿ

ಅಗಣಿತ ಹಸ್ತ ಕಂಕಣ ಹೊಳೆವುತಲಿ

ಜಗದೊಳಧಿಕನು ವೆಂಕಟ ಬಂದ ಮನೆಗೆ ||


ಪಿಡಿದ ಸುದರ್ಶನ ಎಡಗೈಯ ಶಂಖ

ಪಿಡಿದಿದ್ದ ಖಡ್ಗದಿ ಜಡರ ಮರ್ದಿಸುತ

ಉಡಿದಾರ ನಡುವೆ ಹೃದಯದೊಳು ಲಕ್ಷ್ಮೀ

ಬದವರ ಧ್ಯೇಯ ವೆಂಕಟ ಬಂದ ಮನೆಗೆ ||


ಬಾಲಚಂದ್ರನ ಪೋಲ್ವ ಓಲೆಕುಂಡಲವು

ಮೇಲು ಮಾಣಿಕ್ಯ ನವರತ್ನದುಂಗುರವು

ಕಾಲಲಂದುಗೆಯು ನವರತ್ನದ್ಹಾವುಗೆಯು

ಮೇಲುಗಿರಿವಾಸ ವೆಂಕಟ ಬಂದ ಮನೆಗೆ ||


ಇಂದಿರೆರಮಣ ನೀ ಎನ್ನ ಕುಲ ತಿಲಕ

ನಂದನ ಕಂದ ಮುಕುಂದ ಗೋವಿಂದ

ಬಂದೆನ್ನ ಪಾಪದ ಬಂಧನ ಪರಿಹರಿಸೊ

ಕಂದರ್ಪಜನಕ ವೆಂಕಟ ಬಂದ ಮನೆಗೆ ||


ಪಾಷಾಣರೂಪದ ಅಹಲ್ಯಾ ಶಾಪವನು

ಶೋಷಣೆ ಮಾಡಿದ ಸೊಬಗು ರೂಪಿನಲಿ

ಶೇಷಾಚಲಧೀಶ ಮಹಶೇಷಶಯನ

ದಾಸಪಾಲಕನು ವೆಂಕಟ ಬಂದ ಮನೆಗೆ ||


ಹೊಳೆವ ಪೀತಾಂಬರ ಉಡುಗೆ ಕಠಾರಿ

ಹೊಳೆವ ಕಂಗಳ ನೋಟ ಹೊಸ ಪಂಚಬಾಣ

ವೀಳ್ಯದ ಬಾಯ ಕರ್ಪೂರ ಕರಡಿಗೆಯು

ಚೆಲುವ ಶರೀರ ವೆಂಕಟ ಬಂದ ಮನೆಗೆ ||


ಗರುಡನನೇರಿ ಮೂಜಗವ ಮೋಹಿಸುತ

ಪರಮವೈಷ್ಣವರ ಪಾವನವ ಪಾಲಿಸುತ

ಪರಿಪರಿಯ ತನ್ನ ಬಿರುದ ಪೊಗಳಿಸುತ

ಪುರಂದರವಿಠಲ ವೆಂಕಟ ಬಂದ ಮನೆಗೆ ||

**

Comments