ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ purandara dasaru tappugalella neenoppikollo


Restart mobile & try if the above audio is not playing


ಶ್ರೀಪುರಂದರದಾಸರ ಕೃತಿ

ರಾಗ : ಶುಭಪಂತುವರಾಳಿ   ಆದಿತಾಳ


ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನ-

ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||ಪ||


ಸತಿಸುತರಿಗೆ ಸಂಸಾರ ಬಲೆಗೆ ಅತಿ

ಮತಿಹೀನನಾಗಿ ಸಿಕ್ಕೆ ಆಸೆಗಳಿಗೆ

ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ , ಮುಂದೆ

ಗತಿ ಯಾವುದಯ್ಯ ಶ್ರೀಪತಿ ಎನಗೆ ||


ಬಿಸಿಲು ಮಳೆ ಬಿರುಗಾಳಿಯೊಳು , ಬಲು

ದೆಸೆಗೆಟ್ಟೆ ತಿರುಗಿ ದೇಶದೇಶಗಳು

ಹಸಿವು ತೃಷೆಗಳು ಬಲು ಬಾಧಿಸಲು , ಬಹು

ಹುಸಿಯನಾಡಿದೆನಯ್ಯ ಹುಟ್ಟು ಮೊದಲು ||


ಸ್ನಾನ ಸಂಧ್ಯಾನವನೊಂದನರಿಯೆ , ಅನ್ನ-

ಪಾನಗಳನು ನಾನೊಮ್ಮೆ ಮರೆಯೆ

ಹೀನರ ಸಂಗ ಎಂದೆಂದು ತೊರೆಯೆ , ಸು-

ಜ್ಞಾನಿಗಳನಿತ್ತ ಬಾ ಎಂದು ಕರೆಯೆ ||


ಜಪತಪದಲಿ ರೀತಿ ಭಾಷೆಯಿಲ್ಲ ಎ-

ನ್ನಪರಾಧಗಳಿಗಿನ್ನು ಎಣಿಕೆಯಿಲ್ಲ

ಚಪಲತನದಲಿ ಕಾಲ ಕಳೆದೆನಲ್ಲ , ಸ್ವಾಮಿ

ಕಪಟನಾಟಕ ನೀನೆ ಬಲ್ಲೆಯಲ್ಲ ||


ಗಂಗೆ ಅಗ್ರೋದಕಗಳ ತಂದು ಸ್ನಾ-

ನಂಗಳ ಮಾಡಿಸಲಿಲ್ಲ ಎಂದು

ಹೊಂಗೇದಿಗೆ ಪುಷ್ಪವನೊಂದು ಶ್ರೀ-

ರಂಗಗರ್ಪಿಸಲಿಲ್ಲ ಕಾಯೊ ಬಂದು ||


ಗಂಧಾಕ್ಷತೆ ಪುಷ್ಪಗಳಿಂದ

ಒಂದು ದಳ ಶ್ರೀತುಳಸಿಯಿಂದ

ಇಂದಿರೇಶನ ಅರ್ಚಿಸದರಿಂದ , ಬಹು

ನೊಂದು ದೂರಾದೆ ಸದ್ಗತಿಯಿಂದ ||


ಪೀತಾಂಬರಾದಿ ವಸ್ತ್ರಗಳಿಂದ , ದಿವ್ಯ

ನೂತನವಾದ ಆಭರಣದಿಂದ

ಪ್ರೀತಿಪಡಿಸಲಿಲ್ಲಾದರದಿಂದ

ಹೇ, ಸೀತಾಪತೇ ಕೃಷ್ಣ ಹರಿಮುಕುಂದ ||


ಧೂಪಾರತಿಯ ನಾ ಮಾಡಲಿಲ್ಲ , ಒಂದು

ದೀಪವನಾದರೂ ಹಚ್ಚಲಿಲ್ಲ

ಈ ಪರಿ ಕಳೆಯಿತೀ ಜನ್ಮವೆಲ್ಲ , ದೇವ

ಆಪದ್ಭಾಂದವ ಕಾಯೋ ಲಕ್ಷ್ಮೀನಲ್ಲ ||


ಸೋಪಸ್ಕರವನು ಒಂದು ಮಾಡದೆ , ಎಲ್ಲ

ಗೋಪಾಲಕೃಷ್ಣಗೆ ಅರ್ಪಿಸದೆ

ಪಾಪಕರ್ಮಕ್ಕೆ ನಾ ಗುರಿಯಾದೆ , ಸ್ವಾಮಿ

ಶ್ರೀಪತಿ ಕಾಯೊ ಎನ್ನ ಕೈ ಬಿಡದೆ ||


ಪಾಯಸ ಪಂಚಭಕ್ಷ್ಯಗಳಿಂದ

ಆಯತವಾದ ಶಾಕಗಳಿಂದ

ತೋಯ ಶಾಲ್ಯಾನ್ನ ಗೋಘೃತದಿಂದ , ಕೃಷ್ಣ-

ರಾಯನರ್ಚಿಸಲಿಲ್ಲ ಭಕ್ತಿಯಿಂದ ||


ಮಂಗಳಾರತಿಯನು ನಾ ಮಾಡಲಿಲ್ಲ , ಜಯ

ಮಂಗಳವೆಂದು ನಾ ಪಾಡಲಿಲ್ಲ

ಕಂಗಳಿಂದಲಿ ನಿನ್ನ ನೋಡಲಿಲ್ಲ, ಮುದ್ದು

ರಂಗನೆ ಬಾ ಎಂದು ಬೇಡಲಿಲ್ಲ ||


ಹರಿಯ ಪ್ರದಕ್ಷಿಣೆ ಮಾಡಲಿಲ್ಲ , ನರ-

ಹರಿಯ ಪಾದಕೆ ನಾ ಬೀಳಲಿಲ್ಲ

ಹರಿದಿನದುಪವಾಸ ಮಾಡಲಿಲ್ಲ , ಶ್ರೀ-

ಹರಿದಾಸರೊಡನೆ ನಾ ಕೂಡಲಿಲ್ಲ ||


ಅತಿಥಿಗಳೆಂದು ಬಂದರೆ ಮನೆಗೆ

ಗತಿಯಿಲ್ಲ ಕೂಡದು ಎಂದೆ ಎನಗೆ

ಯತಿಗಳ ಕೂಡ ನಿಂದಿಸಿದೆ ಕೊನೆಗೆ , ಶ್ರೀ-

ಪತಿ ದೃಷ್ಟಿಯಿಡು ಈ ಪಾಪಿ ಕಡೆಗೆ ||


ಹೋಮಾರ್ಚನೆ ಔಪಾಸನೆಯೆಲ್ಲ, ಎಂದೂ

ನೇಮದಿಂದಲಿ ನಾ ಮಾಡಲಿಲ್ಲ

ಕಾಮಾತುರದಿ ಕಂಡಕಂಡಲ್ಲೆಲ್ಲ , ರಾಮ

ಭ್ರಾಮಕನಾಗಿ ತಿರುಗಿದೆನಲ್ಲ ||


ಎಷ್ಟು ಹೇಳಲಿ ಅವಗುಣಗಳೆಲ್ಲ , ಅವು

ಅಷ್ಟು ಇಷ್ಟು ಎಂದು ಎಣಿಕೆಯಿಲ್ಲ

ದೃಷ್ಟಿಯಿಂದಲಿ ನೋಡೋ ದೀನವತ್ಸಲ, ಸರ್ವ-

ಸೃಷ್ಟಿಗೊಡೆಯ ಪುರಂದರವಿಟ್ಠಲ ||

**



Comments