ವರದೇಂದ್ರಗುರು ನಿಮ್ಮ ಚರಿಯ ಗುಣವೂ gurugopala dasaru varadendra guru nimma chariya

Restart mobile & try if the above audio is not playing

ಶ್ರೀ ಶ್ರೀ ಗುರುಗೋಪಾಲದಾಸರ ವಿರಚಿತ ಶ್ರೀವರದೇಂದ್ರತೀರ್ಥರ ಸ್ತೋತ್ರಪದ

gurugopaladasaru 1723-1764 (Dasappa) b/o Gopala dasa


ರಾಗ : ಹಂಸಾನಂದಿ       ಆದಿತಾಳ 


ವರದೇಂದ್ರಗುರು ನಿಮ್ಮ ಚರಿಯ ಗುಣವೂ ।

ಧರೆಯೊಳಗೆ ಪರಿಪರಿ ಆಶ್ಚರ್ಯಾಯಿತು ನೋಡೆ ॥ ಪ ॥


ದಿನದಿನಕೆ ಅತಿಶಯವಿತರಣ ಗುಣವಧಿಕವಾಗೆ ।

ಅನಿಮಿಷಾದ್ರಿ ಸವೆದು ಸರಿಯಲಾಗಿ॥

ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।

ಘನ ಹರುಷದಲಿ ಕುಣಿದು ಕುಣಿದು ನಲಿದಾಡುವದು ॥ 1 ॥


ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।

ಉದಿಸಿ ಅಂಬರ ಮಧ್ಯದಲಿ ನಿಂತು ॥

ಮುದನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।

ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ ॥ 2 ॥


ತಾನೇ ಜಗಕೆಲ್ಲ ಒಬ್ಬನೆ ಗುರುವೆನಿಸಿದ । ಗೀರ್ವಾಣರಾಚಾರ್ಯನಿರಲು ಈಗ ॥

ಕ್ಷೋಣಿಯೊಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।

ತಾನಿಲ್ಲದೆಲೆ ನಾಕವಾಸಮಾಡಿದ ಮುದದಿ ॥ 3 ॥


ಕುಂಡಲೀಶನು ಸಕಲ ಭುವನದೊಳಗೆ ತಾನೆ ।

ಪಂಡಿತನೆಂದು ಒಪ್ಪಲು ಈಗ ಭೂ - ॥ 

ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।

ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದನೋ ॥ 4 ॥


ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।

ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ॥

ಎರಡು ಕಂಗಳು ಸಾಲದೆಂದು ಹರುಷದಲಿ । 

ಸಾವಿರನಯನ ಧರಿಸಿ ನೀಕ್ಷಿಸುತಿಹ್ಯ ಬೆರಗಾಗಿ ॥ 5 ॥


ಆವ ಜನುಮದ ಸುಕೃತ ಫಲಿಸಿತೋ ಎನಗಿಂದು ।

ಆವ ಹಿರಿಯರು ವೊಲಿದು ಕರುಣಿಸಿದರೋ ॥

ಕೋವಿದಾಗ್ರಣಿ ಹರುಷದಿ ಎನ್ನ ನೋಡಲು ।

ಕೇವಲ ಧನ್ಯನಾದೆನು ಇವರ ಕರುಣದಲಿ  ॥ 6 ॥


ಗುರುಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।

ಹರಿಯಾಕ್ಷನೆನಿಸಿ ಧರೆಯಲಿ ಮ್ಯೆರವುತಾ॥

ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।

ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯೆರೆವಿ ॥ 7 ॥

****



ಲಘುಟಿಪ್ಪಣಿ 


 ವರದೇಂದ್ರಗುರು ನಿಮ್ಮ ಚರಿಯ ಗುಣವೂ । 

 ಧರೆಯೊಳಗೆ ಪರಿಪರಿ ಆಶ್ಚರ್ಯಾಯಿತು ನೋಡೆ ।। ಪ ।। 


ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು ಶ್ರೀರಾಯರ ಮಠದ ಪೀಠವನ್ನು ಆಳಿದವರು. ಶ್ರೀಗೋಪಾಲದಾಸರು ಹಾಗೂ ಅವರ ಸಹೋದರರೂ ಇವರ ಸಮಕಾಲೀನರು. ಶ್ರೀಗಳವರ ಜಗದ್ಗುರುತ್ವ , ದಾನಶೌಂಡತ್ವ , ಪರಮತ ನಿರಾಕರಣಪೂರ್ವಕ ಶ್ರೀಮನ್ಮಧ್ವಮತಸಂಸ್ಥಾಪಕತ್ವ , ಶಿಷ್ಯಪೋಷಕತ್ವ , ರಾಮ-ವ್ಯಾಸಚರಣಾರ್ಚಕತೆಯ ವೈಭವಾದಿ ಗುಣಗಳನ್ನು ಪ್ರತ್ಯಕ್ಷವಾಗಿ ನೋಡಿ , ಸಂತೋಷ-ಸಂಭ್ರಮಗಳನ್ನು ಹೊಂದಿದ ಶ್ರೀಮಠದ ಶಿಷ್ಯರೂ ಆದ ಶ್ರೀಗುರುಗೋಪಾಲದಾಸರು ಅವರನ್ನು ದರ್ಶನ ಮಾಡಿದಾಗ ಮೈ-ಮನಗಳು ಉಬ್ಬಿ ಮಾಡಿದ ಸ್ತೋತ್ರವಿದು.


 ದಿನದಿನಕೆ ಅತಿಶಯ ವಿತರಣ ಗುಣವಧಿಕವಾಗೆ । 

 ಅನಿಮಿಷಾದ್ರಿ ಸವೆದು ಸರಿಯಲಾಗಿ। 

 ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ । 

 ಘನ ಹರುಷದಲಿ ಕುಣಿದು ಕುಣಿದು ನಲಿದಾಡುವದು ।। ೧ ।। 


ಶ್ರೀಗಳವರು ಸತ್ಪಾತ್ರರಲ್ಲಿ ಮಾಡಿದ ಸುವರ್ಣಾದಿ ದಾನಗಳು ಎಷ್ಟು ಅಧಿಕವಾಯಿತೆಂದರೆ - ಬಂಗಾರದ ಪರ್ವತವಾದ ಮೇರುಪರ್ವತವೂ ಅವರ ನಿರಂತರ ಸುವರ್ಣದಾನದಿಂದ ಕರಗಿಹೋಯಿತು. ಮೇರುವಿನ ಸುತ್ತಲೂ ರಥದಲ್ಲಿ ಕುಳಿತು ಸೂರ್ಯನು ಸಂಚರಿಸುತ್ತಿರುವಾಗ ಈವರೆವಿಗೆ , ಮೇರುಪರ್ವತ ಸೂರ್ಯನಿಗೆ ಮರೆಯಾಗಿತ್ತು. ಆದ್ದರಿಂದಲೇ ದಿನವೊಂದರಲ್ಲಿ ಲೋಕದಲ್ಲಿ ಅರ್ಧಭಾಗಕ್ಕೆ ಹಗಲು ಅರ್ಧಭಾಗಕ್ಕೆ ರಾತ್ರಿಗಳೆಂಬ ವ್ಯವಸ್ಥೆ ಇದ್ದು ಚಕ್ರವಾಕಪಕ್ಷಿಗೆ ರಾತ್ರಿಯಲ್ಲಿ ಸೂರ್ಯನ ವಿರಹ ಉಂಟಾಗಿ ದುಃಖವಾಗುತ್ತಿದ್ದು ಈಗ ಆ ಮೇರು ಶ್ರೀಗಳವರ ನಿರಂತರ ದಾನಕಾರ್ಯದಿಂದ ಸವೆದು ಸರಿದಿದ್ದರಿಂದ ಸೂರ್ಯ ಸಂಚಾರದಿಂದ ಉಂಟಾಗುತ್ತಿದ್ದ ಬೆಳಕಿಗೆ - ಸೂರ್ಯದರ್ಶನಾದಿಗಳಿಗೆ ಅಡ್ಡಿ (ಯಾಗಿದ್ದ ಮೇರು ಕರಗಿ ಸರಿದಿದ್ದರಿಂದ) ನಿವಾರಣೆಯಾಗಿ ನಿರಂತರ ಸೂರ್ಯ ಸಂಚಾರ - ದರ್ಶನಾದಿಗಳು ಆಗುವಂತೆ ಆಯಿತು. ಇದರಿಂದ ಚಕ್ರವಾಕಪಕ್ಷಿಗೆ ಆನಂದವಾಗಿ , ಅದು ವಿಶೇಷಹರ್ಷದಿಂದ ಕುಣಿಕುಣಿದು ನಲಿದಾಡಿತಂತೆ !


ಹದಿನಾರು ಕಳೆಗಳಿಂದುಕ್ಕುವ ಉಡುರಾಜ । 

 ಉದಿಸಿ ಅಂಬರ ಮಧ್ಯದಲಿ ನಿಂತು । 

 ಮುದ ನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ । 

 ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ।। ೨ ।। 


ತನ್ನ ದರ್ಶನಮಾತ್ರದಿಂದ ಜನರಿಗೆ ಆಹ್ಲಾದಕರವಾದ ಚಂದ್ರನು , ತನ್ನ ಮಗನಾದ ಬುಧನ ಸೌಂದರ್ಯ - ಲಕ್ಷಣಗಳನ್ನು ನೋಡಿ ಈವರೆವಿಗೆ ಅವನಿಗೆ ಸಮರಾದ ರೂಪವಂತರು ಇಲ್ಲವೆಂದೇ ಹಿಗ್ಗುತ್ತಿದ್ದ. ಆದರೆ ಶ್ರೀಗಳವರ ರೂಪಲಾವಣ್ಯಗಳ ಮುಂದೆ ಬುಧನ ಸೌಂದರ್ಯ ತೀರ ಕಡಿಮೆ ಎನಿಸಿದ್ದರಿಂದ ಮಗನಿಗಾದ ಈ ತೆರಹದ ಪರಿಸ್ಥಿತಿಯನ್ನು ನೋಡಿ ಲಜ್ಜೆಯಾಗಿ - ಮಗನಿಗೆ ಈ ರೀತಿ ಸೋಲು ಉಂಟಾಗಿದ್ದುದರಿಂದ ಚಿಂತೆಯಲ್ಲಿ (ಕೃಷ್ಣಪಕ್ಷದಲ್ಲಿ) ದಿನದಿನಕ್ಕೆ ಕ್ಷಯಿಸಲು ಪ್ರಾರಂಭಿಸಿದನಂತೆ !


ತಾನೇ ಜಗಕೆಲ್ಲ ಒಬ್ಬನೆ ಗುರುವೆನಿಸಿದ ।

ಗೀರ್ವಾಣರಾಚಾರ್ಯನಿರಲು ಈಗ । 

ಕ್ಷೋಣಿಯೊಳು ನಿಮ್ಮ ಗುರುತ್ವದ ಮಹಿಮೆಯ ಕಂಡು । 

ತಾ ನಿಲ್ಲದೆಲೆ ನಾಕ ವಾಸ ಮಾಡಿದ ಮುದದಿ ।। ೩ ।। 


ಬೃಹಸ್ಪತ್ಯಾಚಾರ್ಯರು ಈವರೆವಿಗೆ ದೇವತೆಗಳಿಗೆ ಗುರುವೆನಿಸಿ ತನ್ನ ಸಮಾನರಾದ ಗುರುಗಳೇ ಇಲ್ಲವೆನ್ನುತ್ತಿದ್ದರು. ಆದರೆ ಈಗ ಶ್ರೀವರದೇಂದ್ರರ ' ಗುರುತ್ವ ' ಮಹಿಮೆಯನ್ನು ಕಂಡು ಭೂಮಂಡಲದಲ್ಲಿ ತನ್ನ ಗುರುತ್ವಕ್ಕೆ ಪ್ರಾಶಸ್ತ್ಯವಿಲ್ಲವಾಯಿತು ಎಂದು ಚಿಂತಿಸಿ ಸ್ವರ್ಗದಲ್ಲೇ ವಾಸಮಾಡಿದನಂತೆ !


ಕುಂಡಲೀಶನು ಸಕಲ ಭುವನದೊಳಗೆ ತಾನೆ । 

 ಪಂಡಿತನೆಂದು ಒಪ್ಪಲು ಈಗ ಭೂ - । 

 ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು । 

 ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದೆನೋ।। ೪ ।। 


 ಕುಂಡಲೀಶ = ಸರ್ಪಗಳಿಗೆ ಸ್ವಾಮಿಯಾದ ಶೇಷದೇವನು ಸಹಸ್ರವದನನಾದ ತಾನೇ ಪಂಡಿತನೆಂದು ಈವರೆವಿಗೆ ಭುವನದಲ್ಲಿ ವೊಪ್ಪಿದ್ದ - ಈಗ ಆತ ಭೂಮಂಡಲದಲ್ಲಿ ಶ್ರೀವರದೇಂದ್ರರ ಪ್ರವಚನಾದಿಗಳನ್ನು ಕಂಡು , ತಲೆಬಾಗಿ ಭೂಮಂಡಲದ ಕೆಳಗೆ ಪಾತಾಳವಾಸಿಯಾದ !


 ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ । 

 ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು । 

 ಎರಡು ಕಂಗಳು ಸಾಲದೆಂದು ಹರುಷದಲಿ । 

 ಸಾವಿರ ನಯನ ಧರಿಸಿ ವೀಕ್ಷಿಸುತಿಹ್ಯ ಬೆರಗಾಗಿ ।। ೫ ।। 


ಸ್ವರ್ಗಾಧಿಪತಿಯಾದ ಇಂದ್ರದೇವರು ತ್ರಿಭುವನದಲ್ಲಿ ಎಲ್ಲರಿಗೂ ಹೆಚ್ಚಿಗೆ ಐಶ್ವರ್ಯವಂತನೆನಿಸಿದ್ದವರು - ಶ್ರೀವರದೇಂದ್ರಸ್ವಾಮಿಗಳವರ ಸಾಮ್ರಾಜ್ಯದ (ವೇದಾಂತ ಹಾಗೂ ಸಾರಸ್ವತ) ಸಿರಿಯನ್ನು ಕಂಡು , ಈ ಐಶ್ವರ್ಯದ ವೈಭವಾದಿಗಳನ್ನು ನೋಡಲು ತನ್ನ ಎರಡು ಕಂಗಳು ಸಾಲದೆಂದು ತಾನು ಸಾವಿರನಯನಗಳನ್ನು ಧರಿಸಿ ಈಕ್ಷಿಸುತ್ತಾ ಬೆರಗಾಗಿದ್ದಾರೆ !


 ಆವ ಜನುಮದ ಸುಕೃತ ಫಲಿಸಿತೋ ಎನಗಿಂದು । 

 ಆವ ಹಿರಿಯರು ವೊಲಿದು ಕರುಣಿಸಿದರೋ । 

 ಕೋವಿದಾಗ್ರಣಿ ಹರುಷದಿ ಎನ್ನ ನೋಡಲು । 

 ಕೇವಲ ಧನ್ಯನಾದೆನು ಇವರ ಕರುಣದಲಿ ।। ೬ ।। 


 ಗುರುಕರುಣ ಬಲದಲ್ಲಿ ಅರಿಕರಿನಿಕರದೊಳಗೆ । 

 ಹರಿಯಾಕ್ಷನೆನಿಸಿ ಧರೆಯಲಿ ಮ್ಯರೆಯುತ । 

 ಮರುತ ಗುರುಗೋಪಾಲವಿಠ್ಠಲ ರಾಮ ವ್ಯಾಸರ । 

 ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯರೆವಿ।। ೭ ।। 


ಶ್ರೀ ಶ್ರೀಪಾದಂಗಳವರು - ವಿಷ್ಣು - ವೈಷ್ಣವರ ಶತ್ರುಗಳೆಂಬ ಆನೆಗಳ ಸಮೂಹ ಮಧ್ಯದಲ್ಲಿ (ಹರ್ಯಾಕ್ಷ = ಸಿಂಹ) ಅವರನ್ನು ಧ್ವಂಸಗೊಳಿಸಲು ಸಿಂಹದಂತೆ ವಿರಾಜಮಾನರಾಗಿರುವರು. ಇಂತಹವರ ದರ್ಶನ - ಉಪದೇಶ - ಸೇವಾದಿಗಳು ದೊರೆಯಲು ಹಿಂದಿನ ಜನ್ಮಗಳ ಪುಣ್ಯವೂ - ಜೊತೆಗೆ ಹಿರಿಯರು ಒಲಿದು ಕರುಣಿಸಿದ್ದು ಕಾರಣವೆಂದೂ , ಇದರಿಂದ ಹಾಗೂ ಶ್ರೀ ಶ್ರೀವರದೇಂದ್ರರ ಕೃಪಾಕಟಾಕ್ಷ ವೀಕ್ಷಣದಿಂದ ತಾವು ಧನ್ಯರಾದೆವೆಂದೂ ಶ್ರೀದಾಸರು ಹರ್ಷಿಸಿದ್ದಾರೆ.

ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

**

Comments