ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮ prasannavenkata dasaru ninna magana muddu neene lalisamma


Restart mobile & try if the above audio is not playing


ಶ್ರೀ ಶ್ರೀ ಪ್ರಸನ್ನವೆಂಕಟ ದಾಸರ ಕೃತಿ 

ರಾಗ: ಸಾವೇರಿ   ಏಕತಾಳ


ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮ

ಚಿನ್ನನೆಂದಾಡಿಸಮ್ಮ

ಬಣ್ಣದ ಬಾಲೇರ ಭೋಗಿಪ ಚದುರತೆ

ಸಣ್ಣವರ ಸರಸೇನಮ್ಮ 

ll pa ll


ತಾಳಬೇಕೆಷ್ಟೆಂದು ಗಾಡಿಕಾರನ ಮಾತ

ಹೇಳಲಂಜುವೆವಮ್ಮ ನ-

ಮ್ಮಾಳುವ ಇನಿಯರ ಬೇಡಿಸಿ ನಮ್ಮ ಲಜ್ಜೆ

ಹಾಳುಮಾಡಿ ಹೋದನೆ ll1ll


ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆ

ದಟ್ಟಿಸಿ ಕೊಲುವೆವಮ್ಮ ಈ

ದೃಷ್ಟಿ ಮಾಯದ ಜಾಲ ನೋಡೆ ನಂದನರಾಣಿ

ಸೃಷ್ಟೀಶರಿಗೆ ತೀರದು ll2ll


ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿ

ನಿನ್ನೆಡೆಗೆ ತರುತಿದ್ದೆವೆ

ಕಣ್ಣಿಯ ಕೊರಳಿನ ಕರುವೆಂದು ಜನವಾಡೆ

ಖಿನ್ನರಾಗಿ ಹೋದೆವೆ ll3ll


ಆವಾವ ಕೇರೀಲಿ ಜಾರ ಚೋರನ ಮಾತು

ಆವಾವ ಮನೆಗಳಲ್ಲಿ

ಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವ

ಜಾವಕಂಜಿಸಿಕೊಂಬನೆ ll4ll


ನಾವು ಮಾಡಿದ ಸುಕೃತವೆಂತೊ ಗೋಪಾಲರೇಯ

ಭಾವಕೆ ಮೆಚ್ಚಿದನೆ

ದೇವರ ದೇವ ಪ್ರಸನ್ವೆಂಕಟೇಶ 

ಜೀವಕೆ ಹೊಣೆಯಾದನೆ ll5ll

**

Comments