ಸೇರಿದೆನೋ ಸೇರಿದೆನೋ ಜಗದೀಶನ vyasarajaru serideno serideno jagadishana

 Restart mobile & try if the above audio is not playing

ಶ್ರೀಶ್ರೀವ್ಯಾಸರಾಜರ ಕೃತಿ

ರಾಗ : ರಂಜನಿ     ಖಂಡಛಾಪು


ಸೇರಿದೆನೋ ಸೇರಿದೆನೋ ಜಗದೀಶನ ॥ ಪ ॥

ನರಕಜನ್ಮದ ಭಯವು ಎನಗೆ ಇನಿತಿಲ್ಲ ॥ ಅ ಪ ॥


ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ ।

ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ॥

ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ ।

ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ ॥ 1 ॥


ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ ।

ಮಸ್ತಕವು ಹರಿಚರಣಕೆರಗುತಿದೆಕೋ ॥

ವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆ ।

ಕಸ್ತೂರಿ ತುಳಸಿಯನು ಮೂಗು ಆಘ್ರಾಣಿಸುತಿದೆ ॥ 2 ॥


ಹರಿನಾಮ ಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆ ।

ಹರಿಭಕುತಿ ಸುಧೆಯ ಪಾನಗಳಿಂದಲಿ ॥

ಹರಿ ಪ್ರೀತಿಯಾಗಿದೆ ನೋಡಿದರೆನ್ನ ದೇಹ ।

 ಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ ॥ 3 ॥

**

Comments